ಪ್ರವಾಹ ಮೈದಾನ

	 ನದಿಯಲ್ಲಿ ಹರಿಯುವ ನೀರಿನ ರಾಶಿ ಸಹಜ ಸ್ಥಿತಿಯನ್ನು ಮೀರಿದಾಗ ಅದು ಆಕ್ರಮಿಸುವ ಆಸುಪಾಸಿನ ಮಟ್ಟಸ ಪ್ರದೇಶ (ಫ್ಲಡ್ ಪ್ಲೇನ್). ಪರಂಬು ಪರ್ಯಾಯನಾಮ. ಇಕ್ಕಾಟ್ಟಾದ ನದೀಪಾತ್ರದಲ್ಲಿ ಅಥವಾ ನೀರು ಹರಿಯುವ ಎಂದಿನ ಜಾಡಿನಲ್ಲಿ ಅಧಿಕಗಾತ್ರದ ಪ್ರವಾಹ ಮುನ್ನುಗ್ಗಿ ಬಂದಾಗ ಅದನ್ನು ಒಮ್ಮೆಗೇ ಸಾಗಹಾಕಲು ಎಡೆ ಸಾಕಾಗದು. ಆಗ ನೆರೆ ನೀರು ಪಾತ್ರ ತುಂಬಿ ದಂಡೆಮೀರಿ ಪರಂಬು ಇಡೀ ವ್ಯಾಪಿಸಿ ಏರುತ್ತದೆ. ಇದರೊಂದಿಗೆ ಪ್ರವಾಹದ ವೇಗ ಇಳಿಯುತ್ತದೆ. ಆದರೆ ಸಾಕಷ್ಟು ಕಾಲ ನೆರೆ ನೀರು ಹೆಚ್ಚುಕಡಿಮೆ ಸ್ಥಗಿತವಾಗಿ ಪ್ರವಾಹ ಮೈದಾನದ ಮೇಲೆ ನಿಂತಿರುತ್ತದೆ. ಬೆಟ್ಟಗುಡ್ಡಗಳ ಕಣಿವೆ ಕಮರಿಗಳ ಬಳಸುದಾರಿಗಳ ಮೂಲಕ ಧಾವಿಸಿಬರುವ ನೀರು ತನ್ನೊಡನೆ ಕೊಚ್ಚಿತಂದ ಬಗ್ಗುಡ ಕಸ ಗಸಿ ಮಣ್ಣು ಮುಂತಾದವುಗಳ ಸಂಮಿಶ್ರಣ ಅಲ್ಲೇ ತಳಕ್ಕೆ ಕಂತಿ ಗಸಿಗಟ್ಟುತ್ತದೆ. ಇದೇ ಮೆಕ್ಕಲುಮಣ್ಣು. ಕ್ರಮೇಣ ನೀರು ಹರಿದು ಹಿಂಗಿ ನೆರೆ ಇಳಿದಾಗ ಮೆಕ್ಕಲು ಮಣ್ಣು ಪರಂಬಿನಲ್ಲಿ ದಾಸ್ತಾನಾಗಿರುತ್ತದೆ. ಎಂದೇ ಪ್ರವಾಹ ಮೈದಾನಗಳು ಪ್ರಪಂಚದಲ್ಲಿ ಅತ್ಯಂತ ಫಲವತ್ಪ್ರದೇಶಗಳೆಂದು ಖ್ಯಾತಿಪಡೆದಿರುವುದಾಗಿದೆ. ಪ್ರಾಚೀನ ಕಾಲದಿಂದ ಅರ್ವಾಚೀನ ಕಾಲದ ತನಕ ನಾಗರಿಕತೆಗಳ ತೂಗುತೊಟ್ಟಿಲುಗಳಾಗಿರುವುದೂ ಕಂಡು ಬಂದಿದೆ. ಪ್ರವಾಹ ಮೈದಾನದಲ್ಲಿ ಮೆಕ್ಕಲುಮಣ್ಣಿನ ಪದರದ ದಪ್ಪ ಶತಮಾನಗಳ ಅವಧಿಗಳಲ್ಲಿ ಗುರುತಿಸಬಹುದಾದ ದರದಲ್ಲಿ ಕ್ರಮೇಣ ಬೆಳೆಯುತ್ತದೆ.

	ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸಂಗ್ರಹಿಸಿರುವ ದಾಖಲೆಗಳಿಂದ 1000 ವರ್ಷಗಳಿಗೆ ಸರಾಸರಿ 6 ಚ.ಸೆಂಮೀ ದರದಲ್ಲಿ ಶಿಲಾಕ್ಷಯ ಆಗುತ್ತದೆ ಎಂದು ತಿಳಿದುಬಂದಿದೆ. ಇಡೀ ಭೂಮಿಯ ಎಲ್ಲ ನದಿಗಳೂ ಸೇರಿ ವರ್ಷವೊಂದರ 24x109 ಘನ ಟನ್ ತೂಕದ ಶಿಲಾವಸ್ತುವನ್ನು ಭೂಖಂಡಗಳಿಂದ ಸಾಗರಗಳಿಗೆ ಸಾಗಿಸುತ್ತವೆ. ಈಚೆಗಿನ ಮೂವತ್ತು ನಲವತ್ತು ವರ್ಷಗಳಲ್ಲಿ ಮಾನವ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಪ್ರಾರಂಭಿಸಿ, ವಿಶೇಷ ಗಣಿಕೆಲಸದಲ್ಲಿ ಉದ್ಯುಕ್ತನಾದ ಬಳಿಕ ಶಿಲಾಕ್ಷಯದ ದರ ಹೆಚ್ಚಿದೆ. ಇದಕ್ಕೆ ಹಿಂದೆ ಭೂತಲದ ಬದಲಾವಣೆಯಲ್ಲಿ ಮಾನವನ ಪಾತ್ರ ಪ್ರಮುಖವಾಗಿರಲಿಲ್ಲ. ಆಗ ಸವೆತದ ದಪ್ಪ 1000 ವರ್ಷಗಳಿಗೆ 2.4 ಸೆಂಮೀ ಗಿಂತ ಕೊಂಚ ಕಡಿಮೆ ಇತ್ತು; ಈಗ ಮಾನವನ ಪಾತ್ರದಿಂದ ಅದು ಸುಮಾರು ಎರಡೂವರೆ ಪಟ್ಟು ಜಾಸ್ತಿ ಆಗಿದೆ. ಈ ದರದಲ್ಲಿ ಸಾಗರಗಳು ಭರ್ತಿಯಾಗಬೇಕಾದರೆ 34 ಕೋಟಿ ವರ್ಷಗಳು ಬೇಕು. ಆದರೆ ಖಂಡಗಳೆಲ್ಲ ಯಾವಾಗಲೂ ಪೂರ್ತಿಯಾಗಿ ಸವೆದು ಹೋದದ್ದೂ ಇಲ್ಲ, ಸಾಗರಗಳು ಭರ್ತಿಯಾದದ್ದೂ ಇಲ್ಲ ಎಂಬ ಅಂಶ ಭೂಮಿಯ ಇತಿಹಾಸದಿಂದ ವ್ಯಕ್ತವಾಗುತ್ತದೆ.

	ಸಾಗರಗಾಮಿಗಳಾದ ಅನೇಕ ನದಿಗಳಿಗೆ ವಿಶಾಲವಾದ ಪ್ರವಾಹ ಮೈದಾನಗಳಿರುತ್ತವೆ. ನದೀ ಮುಖಭೂಮಿಗಳು ಬಲು ಫಲವತ್ತಾಗಿರುವ ಪ್ರವಾಹ ನಿರ್ಮಿತ ಮೈದಾನಗಳೇ. ಕಡಲತೀರದ ಮೈದಾನಗಳಲ್ಲಿಯೂ ಮೆಕ್ಕಲು ಮಣ್ಣು ಎತ್ತರವಾಗಿ ಶೇಖರವಾಗುವುದುಂಟು. ಇವುಗಳ ಮೂಲಕ ಕೊಳವೆಬಾವಿಗಳನ್ನು ತೋಡಿದಾಗ ಹೈಡ್ರೋಜನ್ ಸಲ್ಫೈಡ್ ಅನಿಲ ಇರುವುದು ವ್ಯಕ್ತವಾಗುತ್ತದೆ.
										   (ಎ.ಎನ್.ಎಸ್.ಐ.)